ದ್ಯುತಿ ಉಪಕರಣ
ದ್ಯುತಿ ಉಪಕರಣಗಳು
[ಬದಲಾಯಿಸಿ]ಕಣ್ಣು ಒಂದು ಅದ್ಭುತ ಅಂಗ. ಆದರೆ ಕಣ್ಣಿಗೆ ಅತಿ ಸೂಕ್ಷ್ಮ ಮತ್ತು ದೂರದ ನಕ್ಷತ್ರಗಳ ವಿವರಗಳು ಕಾಣಿಸುವುದಿಲ್ಲ. ಅವುಗಳ ಅಧ್ಯಯನದಲ್ಲಿ ಮಾನವನ ಕುತೂಹಲವು ದ್ಯುತಿ ಉಪಕರಣಗಳ ಶೋಧನೆಗೆ ಅನುವು ಮಾಡಿತು.[೧]
ಸರಳ ಸೂಕ್ಷ್ಮದರ್ಶಕ
[ಬದಲಾಯಿಸಿ]ಬರಿಗಣ್ಣಿಗೆ ಕಾಣದ ಅತಿಸೂಕ್ಷ್ಮ ಭಾಗಗಳು ಮತ್ತು ನೋಡಲು ಹಾಗು ಅಧ್ಯಯನ ಮಾಡಲು ಉಪಯೋಗಿಸುವ ಸಾಧನವೇ ಸರಳ ಸೂಕ್ಷ್ಮದರ್ಶಕ. ಇದರಲ್ಲಿ ಕಡಿಮೆ ಸಂಗಮದೂರದ ಪೀನ ಮಸೂರಕ್ಕೆ ಒಂದು ಕಟ್ಟು ಮತ್ತು ಒಂದು ಹಿಡಿ ಇರುತ್ತದೆ. ಇದನ್ನು ಸಾಮಾನ್ಯವಾಗಿ ಕೈ ಮಸೂರ ಎಂದೂ ಕರೆಯಲಾಗುತ್ತದೆ.
ಸರಳ ಸೂಕ್ಷ್ಮ ದರ್ಶಕದ ಉಪಯೋಗಗಳು
[ಬದಲಾಯಿಸಿ]- ಚಿಕ್ಕ ಮತ್ತು ಹತ್ತಿರದ ವಸ್ತುಗಳ ನೇರ ಮತ್ತು ದೊಡ್ಡದಾದ ಪ್ರತಿಬಿಂಬಗಳನ್ನು ವೀಕ್ಷಿಸಲು ಉಪಯೋಗಿಸಲಾಗುತ್ತದೆ.
- ಸಣ್ಣ ಅಕ್ಷರಗಳನ್ನು ಓದಲು ಉಪಯೋಗಿಸುತ್ತಾರೆ.
- ಹಸ್ತ ಸಾಮುದ್ರಕರು, ಹಸ್ತ ರೇಖೆಗಳನ್ನು ಓದಲು ಉಪಯೋಗಿಸುತ್ತಾರೆ.
ಸಂಯುಕ್ತ ಸೂಕ್ಷ್ಮದರ್ಶಕ
[ಬದಲಾಯಿಸಿ]ಒಂದು ಕೊಳವೆಯ ಅಕ್ಷದಲ್ಲಿನ ಸ್ಥಿರ ದೂರದಲ್ಲಿ ಇಟ್ಟಿರುವ ಎರಡು ಬೇರೆಬೇರೆ ಸಂಗಮದೂರ ಹೊಂದಿರುವ ಪೀನ ಮಸೂರಗಳನ್ನೊಳಗೊಂಡ ಸೂಕ್ಷ್ಮದರ್ಶಕವನ್ನು ಸಂಯುಕ್ತ ಸೂಕ್ಷ್ಮದರ್ಶಕ ಎನ್ನುವರು.
ಸಂಯುಕ್ತ ಸೂಕ್ಷ್ಮದರ್ಶಕದ ರಚನೆ
[ಬದಲಾಯಿಸಿ]ಸಂಯುಕ್ತ ಸೂಕ್ಷ್ಮದರ್ಶಕವು ಎರಡು ಪೀನ ಮಸೂರಗಳನ್ನು ಹೊಂದಿದ್ದು ಅವುಗಳನ್ನು ಒಂದೇ ಅಕ್ಷದಲ್ಲಿನ ಸಿಲಿಂಡರ್ ಆಕೃತಿಯ ಜಾರು ಕೊಳವೆಯ ಹೊರ ತುದಿಗಳಲ್ಲಿ ಜೋಡಿಸಿರುತ್ತಾರೆ. ಕಡಿಮೆ ಸಂಗಮ ದೂರದ ಮಸೂರವನ್ನು ವಸ್ತು ಮಸೂರ ಎನ್ನುವರು ಮತ್ತು ಹೆಚ್ಚು ಸಂಗಮ ದೂರದ ಮಸೂರವನ್ನು ನೇತ್ರ ಮಸೂರ ಎನ್ನುವರು.
ದೂರದರ್ಶಕ
[ಬದಲಾಯಿಸಿ]ದೂರದ ವಸ್ತುಗಳು ನಮ್ಮ ಕಣ್ಣಿಗೆ ಹತ್ತಿರವಿರುವಂತೆ ಗೋಚರಿಸಲು ಉಪಯೋಗಿಸುವ ಸಾಧನವೇ ದೂರದರ್ಶಕ. ದೂರದರ್ಶಕದಲ್ಲಿ ಖಗೋಳ ದೂರದರ್ಶಕ ಮತ್ತು ಭೌಮಿಕ ದೂರದರ್ಶಕಗಳೆಂಬ ಎರಡು ವಿಧಗಳಿವೆ.
ಖಗೋಳ ದೂರದರ್ಶಕ
[ಬದಲಾಯಿಸಿ]ಆಕಾಶಕಾಯಗಳಾದ ನಕ್ಷತ್ರಗಳು, ಗ್ರಹಗಳು ಮತ್ತು ಉಪಗ್ರಹಗಳು ಮುಂತಾದವುಗಳನ್ನು ನೋಡಲು ಉಪಯೋಗಿಸುವ ದೂರದರ್ಶಕವನ್ನು ಖಗೋಳ ದೂರದರ್ಶಕ ಎನ್ನುವರು. ಖಗೋಳ ದುರದರ್ಶಕದಲ್ಲಿ ಎರಡು ಪೀನ ಮಸೂರಗಳಿದ್ದು ಅವುಗಳನ್ನು ಒಂದೇ ಅಕ್ಷದಲ್ಲಿನ ಸಿಲಿಂಡರ್ ಆಕೃತಿಯ ಜಾರು ಕೊಳವೆಯ ಹೊರ ತುದಿಗಳಲ್ಲಿ ಜೋಡಿಸುತ್ತಾರೆ. ಹೆಚ್ಚು ಸಂಗಮ ದೂರದ ಮಸೂರವನ್ನು ವಸ್ತುಮಸೂರವಾಗಿ ಮತ್ತು ಕಡಿಮೆ ಸಂಗಮ ದೂರದ ಮಸೂರವನ್ನು ನೇತ್ರಮಸೂರವಾಗಿ ಬಳಸುವರು.
ಭೌಮಿಕ ದೂರದರ್ಶಕ
[ಬದಲಾಯಿಸಿ]ಭೂಮಿಯ ಮೇಲೆ ದೂರದ ವಸ್ತುಗಳನ್ನು ಪೂರ್ಣವಾಗಿ ವೀಕ್ಷಿಸಲು ಬಳಸುವ ದೂರದರ್ಶಕವನ್ನು ಭೌಮಿಕ ದೂರದರ್ಶವೆನ್ನುತ್ತೇವೆ.೧೬೦೯ರಲ್ಲಿ ಗೆಲಿಲಿಯೋ ಭೌಮಿಕ ದೂರದರ್ಶಕವಾದ ಗೆಲಿಲಿಯನ್ ದೂರದರ್ಶಕವನ್ನು ರಚಿಸಿದನು.ಇದು ದೂರದ ವಸ್ತುಗಳ ನೇರ ಪ್ರತಿಬಿಂಬವನ್ನು ಉಂಟುಮಾಡಿತು.ಈ ದೂರದರ್ಶಕದಲ್ಲಿ ವಸ್ತು ಮಸೂರವಾಗಿ ಪೀನ ಮಸೂರವನ್ನು ಮತ್ತು ನೇತ್ರ ಮಸೂರವಾಗಿ ನಿಮ್ನ ಮಸೂರವನ್ನು ಬಳಸಿದರು.
ಕ್ಯಾಮೆರಾ
[ಬದಲಾಯಿಸಿ]ಒಂದು ವಸ್ತು ಅಥವಾ ಒಂದು ದೃಶ್ಯದ ಶಾಶ್ವತ ಪ‍್ರತಿಬಿಂಬವನ್ನು ಪಡೆಯಲು ಬಳಸುವ ಸಾಧನವೇ ಕ್ಯಾಮೆರಾ.ಇಂದಿನ ದಿನಗಳಲ್ಲಿ ಪರದೆಯ ಕ್ಯಾಮೆರಾಗಳ ಬದಲಾಗಿ ಡಿಜಿಟಲ್ ಕ್ಯಾಮೆರಾಗಳನ್ನು ಬಳಸುತ್ತಿದ್ದೇವೆ.ಈ ಡಿಜಿಟಲ್ ಕ್ಯಾಮೆರಾಗಳು ಸಾಂಪ್ರದಾಯಿಇಕ ಕ್ಯಾಮೆರಾಗಳಂತೆ ಮಸೂರವನ್ನು ಹೊಂದಿದ್ದು ಇದು ದೃಶ್ಯದ ಪ್ರತಿಬಿಂಬವನ್ನು ಸೆರೆಹಿಡಿಯಲು ಬೆಳಕನ್ನು ಕೇಂದ್ರೀಕರಿಸುತ್ತದೆ. ಆದರೆ ಕೇಂದ್ರಿಕೃತವಾದ ಬೆಳಕು ಪರದೆಯ ಮೇಲೆ ಬೀಳುವ ಬದಲು ಅರೆವಾಹಕ ಸಾಧನದ ಮೇಲೆ ಕೇಂದ್ರಿಕೃತಗೊಂಡು ವಿದ್ಯುನ್ಮಾನವಾಗಿ ಬೆಳಕು ಸಂಗ್ರಹವಾಗುತ್ತದೆ. ಎಲ್ಲಾ ಡಿಜಿಟಲ್ ಕ್ಯಾಮೆರಾಗಳಲ್ಲಿ ಇಲೆಕ್ಟ್ರಾನಿಕ್ ತಂತ್ರಜ್ಞಾನವಿದ್ದು ಅದು ವಿದ್ಯುನ್ಮಾನ ಮಾಹಿತಿಯನ್ನು ಡಿಜಿಟಲ್ ದತ್ತಾಂಶವಾಗಿ ಪರಿವರ್ತಿಸುತ್ತದೆ.
ದ್ವಿನೇತ್ರಿ
[ಬದಲಾಯಿಸಿ]ಯುಧ್ಧ ಭೂಮಿಯ ಸೇನಾ ಕಾರ್ಯಾಚರಣೆಯಲ್ಲಿ ,ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುವಾಗ ದೃಶ್ಯಾವಲೋಕನದಲ್ಲಿ ಬಳಸುವ ದ್ಯುತಿ ಉಪಕರಣವೇ ದ್ವಿನೇತ್ರಿ.ಗ್ಯಾಲರಿಯಲ್ಲಿ ಕುಳಿತು ಪಂದ್ಯದ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ವೀಕ್ಷಿಸಲು, ವನ್ಯಜೀವಿಗಳ ಸಫಾರಿಯಲ್ಲಿ ದೂರದಲ್ಲಿನ ಪ್ರಾಣಿಗಳನ್ನು ಸ್ಪಷ್ಟವಾಗಿ ನೋಡಲು ದ್ವಿನೇತ್ರಿಯನ್ನು ಬಳಸುತ್ತಾರೆ.
ಉಲ್ಲೇಖ
[ಬದಲಾಯಿಸಿ]- ↑ http://www.physchem.co.za/OB11-wav/instruments.htm Archived 2015-12-03 ವೇಬ್ಯಾಕ್ ಮೆಷಿನ್ ನಲ್ಲಿ.