ವಿಷಯಕ್ಕೆ ಹೋಗು

ಹೆರ್ಮನ್ ಜೋಸೆಫ್ ಮುಲ್ಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆರ್ಮನ್ ಮುಲ್ಲರ್

ಹೆರ್ಮನ್ ಜೋಸೆಫ್ ಮುಲ್ಲರ್ (1890-1967; ಜನನ: 21, ಡಿಸೆಂಬರ್ 1890 ನ್ಯೂಯಾರ್ಕ್‌ನಲ್ಲಿ, ಮರಣ 5, ಏಪ್ರಿಲ್ 1967 ಬ್ಲುಮಿಂಗ್‌ಟನ್ ಇಂಡಿಯಾನಾ) ಅಮೆರಿಕಾದ ಒಬ್ಬ ತಳಿವಿಜ್ಞಾನಿ. ಜೀನಿನ ಸ್ವಯಂ ಪ್ರೇರಿತ ಅಥವಾ ಅಂತಃಪ್ರವೃತ್ತಿ (Spontanious) ವಿಕೃತಿ (ಮ್ಯುಟೇಷನ್)ಗಳ ಬಗೆಗಿನ ಅಧ್ಯಯನ ಮತ್ತು ಪರಿಮಾಣಾತ್ಮಕ ವಿವರಣೆ ನೀಡಿದ್ದಾನೆ. 1946ರಲ್ಲಿ ಶರೀರಕ್ರಿಯಾ ಶಾಸ್ತ್ರ ಮತ್ತು ವೈದ್ಯಕೀಯ ವಿಭಾಗದ ನೋಬೆಲ್ ಪ್ರಶಸ್ತಿ ದೊರಕಿದೆ.

ಜೀವನ, ಸಾಧನೆಗಳು

[ಬದಲಾಯಿಸಿ]

ಪ್ರಾಕೃತಿಕ ಮತ್ತು ಪ್ರಚೋದಕ ವಿಕೃತಿಗಳ ಅಧ್ಯಯನದಲ್ಲಿ ಅನೇಕ ಸಂಶೋಧಕರು, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಕೀರ್ತಿ ಮುಲ್ಲರ್‌ನದು. ಶಾಖವು ಹೇಗೆ ವಿಕೃತಿಗಳನ್ನು ಉಂಟುಮಾಡುವುದರಲ್ಲಿ ನೆರವಾಗುತ್ತದೆ ಎಂದು ತೋರಿಸಿದ್ದಾನೆ.[] 1927ರಲ್ಲಿ ಕ್ಷ-ಕಿರಣಗಳ ಬಳಕೆ ಹೇಗೆ ಸುಮಾರು 150 ಪಟ್ಟು ವಿಕೃತಿಗಳನ್ನು ಹೆಚ್ಚಿಸಬಲ್ಲವು ಎಂಬ ಸತ್ಯ ಹೊರಗೆಡಹಿದ. ವಿಷೇಷವಾಗಿ ಹೆಣ್ಣು ನೊಣ, ಡ್ರೋಸೆಫಿಲಾ ಮಲನೋಗ್ಯಾಸ್ಟರ್‌ಗಳನ್ನು ವಿವಿಧ ಪರಿಮಾಣಗಳ ವಿಕಿರಣಕ್ಕೆ ಹಾಗೂ ಅವಧಿಗಳಿಗೆ ಒಡ್ಡಿ ಅವುಗಳಲ್ಲುಂಟಾಗುವ ವಿಕೃತಿಗಳನ್ನು ಅಂಕಿ-ಅಂಶಗಳಿಂದ ವಿವರಿಸಿದ್ದಾನೆ. ಗರ್ಭಾಣುಗಳ ಮೇಲೆ ಕ್ಷ-ಕಿರಣದ ಪ್ರಭಾವವಾದರೆ ಹೇಗೆ ಪೀಳಿಗೆಯಿಂದ ಪೀಳಿಗೆಗೆ ಹಾನಿಯುಂಟಾಗಬಲ್ಲದೆಂದು ತೋರಿಸಿದ್ದಾನೆ. ಕ್ಷ-ಕಿರಣಗಳ ವಿಪರೀತ ಬಳಕೆ ಮಾನವ ಜನಾಂಗಕ್ಕೆ ಮಾರಕವಾಗುವುದೆಂಬ ಸತ್ಯಾಸತ್ಯತೆಯ ಚಳುವಳಿಯನ್ನೂ ನಡೆಸಿ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದ್ದ.[] ಜೀನುಗಳ ವಿಚಾರದಲ್ಲಿ ಮುಲ್ಲರನ ವ್ಯಾಖ್ಯಾನಗಳ ಬಗ್ಗೆ ತೀವ್ರ ವಾದಗಳು ಪರವಾಗಿಯೂ ವಿರೋಧವಾಗಿಯೂ ಆಗಿನಿಂದಲೂ ಮಂಡಿಸಲ್ಪಡುತ್ತಿವೆ. ಈತನ ಅಭಿಪ್ರಾಯಗಳಿಗೆ ಸಾಕಷ್ಟು ಮನ್ನಣೆ ದೊರಕಿದ್ದರೂ ಇನ್ನೂ ಕೆಲವು ವಾದಗ್ರಸ್ತವಾಗಿಯೇ ಉಳಿದಿವೆ.

ಮುಲ್ಲರ್‌ನು ಹಾರ್‌ಲೆಮ್‌ನಲ್ಲಿನ ಪಬ್ಲಿಕ್ ಸ್ಕೂಲ್ ನಂತರ ಬ್ರಾಂಕ್ಸ್‌ನಲ್ಲಿರುವ ಮಾರಿಸ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ನಡೆಸಿದ. ಬ್ರಾಂಕ್ಸ್‌ನಲ್ಲಿ ತನ್ನ ಸಹಪಾಠಿಗಳೊಂದಿಗೆ ವಿಜ್ಞಾನ ಸಂಘ (Science Club) ಪ್ರಾರಂಭಿಸಿದ್ದ. 1907ರಲ್ಲಿ ‘ಕೂಪರ್ ಹೆವಿಟ್’ ವಿದ್ಯಾರ್ಥಿ ವೇತನ ಪಡೆದು ಕೋಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರಿದ. ವಿದ್ಯಾಭ್ಯಾಸದ ಮೊದಲ ಹಂತದಲ್ಲೇ ತಳಿಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ. ಕಾರ್ನೆಲ್ ಮೆಡಿಕಲ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಕಾರ್ಯ ಪ್ರವೃತ್ತನಾಗಿದ್ದು ನಂತರ 1912 ರಿಂದ 1915ರ ವರೆಗೆ ಕೋಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಕೈಗೊಂಡ. ಅಂದಿನ ಪ್ರಸಿದ್ಧ ವಿಜ್ಞಾನಿ ಲೇಖಕನಾದ ಜೂಲಿಯನ್ ಹಕ್ಸಲಿ 1915ರಲ್ಲಿ ಹೌಸ್ಟನ್‍ನಲ್ಲಿರುವ ರೈಸ್ (Rice) ಇನಸ್ಟಿಟ್ಯೂಟ್‌ನಲ್ಲಿ ಬೋಧಕನಾಗುವಂತೆ ಆಹ್ವಾನಿಸಿದ. ಇಲ್ಲಿ 1918ರ ವರೆಗೂ ಜೀವಶಾಸ್ತ್ರದ ಅನೇಕ ಶಾಖೆಗಳನ್ನು ಬೋಧಿಸುತ್ತಿದ್ದರೂ ವಿಕೃತಿಗಳ ಬಗೆಗಿನ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡ. 1918ರಲ್ಲಿ ಕೋಲಂಬಿಯಾ ವಿಶ್ವವಿದ್ಯಾಲಯಕ್ಕೆ ಮರಳಿ ಬಂದು ಪರಿಮಾಣಾತ್ಮಕ ವಿಕೃತಿ ಪ್ರಯೋಗಗಳನ್ನು ನಡೆಸಿದ.[] 1920ರಲ್ಲಿ ಟೆಕ್ಸಾಸ್‌ನಲ್ಲಿರುವ ಆಸ್ಟಿನ್ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕನಾಗಿ[] ನಂತರ 1925ರಲ್ಲಿ ಪ್ರಾಧ್ಯಾಪಕನಾಗಿ ಬಡ್ತಿ ಪಡೆದ. 1932ರಲ್ಲಿ ಟಿಮೋಪೆಪ್ ರೆಸೋವ್‌ಸ್ಕಿಯೊಂದಿಗೆ ಬರ್ಲಿನ್‌ನಲ್ಲಿ ಮೂರು ವರ್ಷ ಸಂಶೋಧನೆ ನಡೆಸಿದ. ಆ ನಂತರ ರಷ್ಯಾದ ಅಕಾಡೆಮಿ ಆಫ್ ಸೈನ್ಸ್‌ನಲ್ಲಿ ತಳೀಶಾಸ್ತ್ರದಲ್ಲಿ ಸಂಶೋಧನೆ ನಡೆಸಲು ಮೊದಲು ಲೆನಿನ್‌ಗ್ರೇಡ್ ಹಾಗೂ ಮಾಸ್ಕೋಗೆ ತೆರಳಿದ. ಸಂಶೋಧನೆಗಳಲ್ಲಿ ರಾಜಕೀಯ ಒತ್ತಡ ಹೇರಿದ್ದರಿಂದ ರಷ್ಯಾವನ್ನು ತೊರೆದು[] 1937 ರಿಂದ 1940ರವರೆಗೆ ಎಡಿನ್‌ಬರ್ಗನಲ್ಲಿ ಸಂಶೋಧನೆ ಮುಂದುವರೆಸಿದ. 1942ರಲ್ಲಿ ಅಮೆರಿಕಾದ ಆಮ್‌ಹೆರ್ಸ್ಟ್ ಕಾಲೇಜ್, 1945ರಲ್ಲಿ ಇಂಡಿಯಾನ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. 1953ರಲ್ಲಿ ಇವನನ್ನು ವಿಶೇಷ ಪ್ರಶಸ್ತಿ ಪಡೆದ ಪ್ರಾಧ್ಯಾಪಕನಾಗಿಯೂ 1964ರಲ್ಲಿ ವಿಶೇಷ ಗೌರವಕ್ಕೆ ಪಾತ್ರನಾದ ಪ್ರಾಧ್ಯಾಪಕನಾಗಿಯೂ ಪರಿಗಣಿಸಲಾಯಿತು. 1964-66ರ ಅವಧಿಯಲ್ಲಿ ಇವನು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಆಹ್ವಾನಿತ ಪ್ರಾಧ್ಯಾಪಕನಾಗಿಯೂ ಇದ್ದ. ಇಂಡಿಯಾನದ ಇಂಡಿಯಾನಪೊಲಿಸ್ ನಗರದಲ್ಲಿ 5-4-1967ರಂದು ನಿಧನನಾದ.

ಈತನ ಸಂಶೋಧನೆಗಳಿಂದ ವಿಕಿರಣಗಳು ವಿಕೃತಿ ಮತ್ತು ಕ್ಯಾನ್ಸರ್‌ಕಾರಕಗಳಾಗುವಲ್ಲಿ ಪ್ರಧಾನಪಾತ್ರ ವಹಿಸುತ್ತವೆ ಎಂಬುದು ಧೃಢಪಟ್ಟಿತು.

ಉಲ್ಲೇಖಗಳು

[ಬದಲಾಯಿಸಿ]
  1. Carlson, Elof Axel (1981). Genes, radiation, and society: the life and work of H. J. Muller. Ithaca, N.Y: Cornell University Press. ISBN 978-0-8014-1304-9.
  2. Carlson, Genes, Radiation, and Society, pp. 141–164
  3. Carlson, Genes, Radiation, and Society, pp. 91–108
  4. Carlson, Genes, Radiation, and Society, pp. 109–119
  5. Carlson, Genes, Radiation, and Society, pp. 204–234; quotation from p 233, correspondence from Muller to Julian Huxley, March 9, 1937

ಹೊರಗಿನ ಕೊಂಡಿಗಳು

[ಬದಲಾಯಿಸಿ]